ಪುತ್ತೂರು: ಧರ್ಮ ಸಾಮರಸ್ಯದ ಪ್ರತೀಕವಾದ ಇರ್ದೆ- ಪಳ್ಳಿತ್ತಡ್ಕ ದರ್ಗಾ ಷರೀಫ್ ಉರೂಸ್ ವಿಶೇಷಾಂಕ: ಇರ್ದೆ ಉರೂಸ್‌ಗೆ ಬೆಲ್ಲ ಗಂಜಿ ಪ್ರಸಾದ!
ಇಲ್ಲಿ ಈ ಬಾರಿ ನಡೆಯುತ್ತಿರುವುದು 49ನೇ ಊರೂಸ್. ಕೊರಿಂಗಿಲ ದಿ. ಮದಾರಿ ಕುಂಞಿ ಅವರ ನೇತೃತ್ವದಲ್ಲಿ ಪುತ್ತೂರು ಮುದರ್ರಿಸ್ ಆಗಿದ್ದ ಸಯ್ಯದ್ ಕೆ.ಪಿ ಮುಹಮ್ಮದ್ ತಂಙಳ್ ಅವರ ಮಾರ್ಗದರ್ಶನದಲ್ಲಿ ಪ್ರಥಮವಾಗಿ ಉರೂಸ್ ನಡೆದಿತ್ತು. ಈ ಬಾರಿ ಎ.20ರಂದು ಪ್ರಾರಂಭಗೊಂಡಿರುವ ಉರೂಸ್ ಕಾರ್ಯಕ್ರಮ ಎ.26ರಂದು ಕೊನೆಗೊಳ್ಳಲಿದೆ.
ಏನಿದು ಬೆಲ್ಲದ ಗಂಜಿ? ಈ ದರ್ಗಾದಲ್ಲಿ ಊರೂಸ್ ನಡೆಯುವ ಎಲ್ಲ ದಿನಗಳಲ್ಲಿ ಬೆಲ್ಲದ ಗಂಜಿ ವಿತರಣೆ ಮಾಡಲಾಗುತ್ತದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಬೆಲ್ಲ ಗಂಜಿ ವಿತರಣೆ ಆರಂಭವಾಗುತ್ತದೆ. ಕೆಲವೊಮ್ಮೆ ರಾತ್ರಿ 8 ಗಂಟೆ ತನಕವೂ ವಿತರಣೆ ಯಾದದ್ದು ಇದೆ. ಬೆಲ್ಲ ಗಂಜಿಯನ್ನು ಅಲ್ಲೇ ಉಣ್ಣಬಹುದು ಅಥವಾ ಮನೆಗೆ ಕೊಂಡು ಹೋಗಬಹುದು. ಇದನ್ನು ಪ್ರಸಾದ ಎಂಬ ನೆಲೆಯಲ್ಲಿ ಸರ್ವಧರ್ಮೀಯರು ಬರುತ್ತಾರೆ ಎನ್ನುತ್ತಾರೆ ದರ್ಗಾದ ಮಾಜಿ ಕಾರ್ಯದರ್ಶಿ ಶಾಹುಲ್ ಹಮೀಸ್. ಮೊದಲ ನಾಲ್ಕು ದಿನ ತಲಾ 1 ಕ್ವಿಂಟಾಲ್ ಅಕ್ಕಿಯ ಬೆಲ್ಲದ ಗಂಜಿ ತಯಾರಾದರೆ, ಕೊನೆಯ ಎರಡು ದಿನ ಇದರ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಊರೂಸ್‌ನ ಕೊನೆಯ ದಿನದಂದೂ 5 ಕ್ವಿಂಟಾಲ್ ಅಕ್ಕಿಯ ಬೆಲ್ಲದ ಗಂಜಿ ತಯಾರಾದದ್ದು ಇದೆ.
ಹರಕೆ ರೂಪದಲ್ಲಿ ಸಮರ್ಪಣೆ:
ಅನಾದಿ ಕಾಲದಿಂದ ಕೃಷಿಕರು ಗದ್ದೆಯಲ್ಲಿ ಬೆಳೆದ ಮೊದಲ ಕೊಯ್ಲಿನ ನಿರ್ದಿಷ್ಟ ಅಕ್ಕಿಯನ್ನು ಈ ದರ್ಗಾಕ್ಕೆ ಬೆಲ್ಲದ ಗಂಜಿಗೆಂದೇ ನೀಡುತ್ತಿದ್ದ ಸಂಪ್ರದಾಯ ಇದೆ. ಹಲವರು ತಮ್ಮ ಕಷ್ಟ, ಕಾರ್ಪಣ್ಯಗಳ ಪರಿಹಾರಕ್ಕೆ ಬೆಲ್ಲದ ಗಂಜಿಗೆಂದು ಅಕ್ಕಿ, ಬೆಲ್ಲ, ಸಕ್ಕರೆ ಹರಕೆ ನೀಡುತ್ತಾರೆ. ಮುಸ್ಲಿಮರು ಮಾತ್ರವಲ್ಲದೆ ಉಳಿದ ಧರ್ಮದವರೂ ಇಲ್ಲಿಗೆ ಭೇಟಿ ನೀಡಿ ಬೆಲ್ಲದ ಗಂಜಿ ಸವಿಯುವುದು, ಹರಕೆ ಒಪ್ಪಿಸುವುದು ಮತ್ತು ಪ್ರಾರ್ಥನೆ ಸಲ್ಲಿಸುವುದು ಇದೆ. ಕೆಲವೊಮ್ಮೆ ಶುಕ್ರವಾರದಂದೂ ಬೆಲ್ಲದ ಗಂಜಿಯನ್ನು ಮನೆಯಲ್ಲೇ ತಯಾರಿಸಿ ಮಸೀದಿಗೆ ತಂದು ಹಂಚುವುದು ಇದೆ. ವಿದೇಶಕ್ಕೂ ಕೊಂಡೊಯ್ಯತ್ತಾರೆ ! ಕೆಲವರು ಉರೂಸ್ ಸಂದರ್ಭದಲ್ಲಿ ಸಿಗುವ ಬೆಲ್ಲದ ಗಂಜಿಯನ್ನು ಸಂರಕ್ಷಿಸಿ ವಿದೇಶದಲ್ಲಿರುವ ಬಂಧುಗಳಿಗೆ ಕೊಂಡೊಯ್ಯುತ್ತಾರೆ. ಎ.26 ರಂದು ಉರೂಸ್‌ನ ಕೊನೆಯ ದಿನವಾಗಿದ್ದು ಅಂದು ಸಾವಿರಾರು ಜನರು ಆಗಮಿಸಿ ಈ ಗಂಜಿ ಬೆಲ್ಲವನ್ನು ಪಡೆಯುತ್ತಾರೆ.
ಹಿಂದೂಗಳ ಜಾಗದಲ್ಲಿ ದರ್ಗಾ ! ಈ ದರ್ಗಾ ಸಾಮರಸ್ಯಕ್ಕೂ ಹೆಸರುವಾಸಿ. ಇಲ್ಲಿನ ಊರೂಸ್ ಸಮಾರಂಭದ ಆಮಂತ್ರಣ ಹಿಂದೂಗಳ ಮನೆಗಳಿಗೂ ಹೋಗುತ್ತದೆ. ಈ ದರ್ಗಾ ನಿರ್ಮಾಣ ಆದದ್ದು ಹಿಂದೂ ಧರ್ಮೀಯರಿಗೆ ಸೇರಿದ ಜಾಗದಲ್ಲಿ ಅನ್ನುವುದೇ ವಿಶೇಷ. ಆ ಕಾಲದಲ್ಲಿ ನಿರ್ಜನ ಪ್ರದೇಶವಾಗಿದ್ದ ಸ್ಥಳದಲ್ಲಿ ಮುಸ್ಲಿಂ ಧರ್ಮಗುರೊಬ್ಬರ ಸಮಾಧಿ ಇತ್ತು. ಕೆಲ ಪವಾಡಗಳು ಇಲ್ಲಿ ಸಂಭವಿಸುತ್ತಿದ್ದು ಆಗ ಸರ್ವಧರ್ಮೀಯರು ಕೈ ಮುಗಿಯಲಾರಂಭಿಸಿದರು. ಕ್ರಮೇಣ ಮುಸ್ಲಿಂ ಬಂಧುಗಳು ಅಲ್ಲಿ ಬಹುಮಾನ್ಯ ವಲಿಯಲ್ಲಾಹಿ ಗುರುಗಳ ಹೆಸರಿನಲ್ಲಿ ದರ್ಗಾ ನಿರ್ಮಾಣಕ್ಕೆ ಮುಂದಾದಾಗ ಜಾಗದ ಮಾಲಕ ಶ್ರೀನಿವಾಸ ರೈ ಅವರು ಅವಕಾಶ ನೀಡಿದರು.
ಅವರ ಅಳಿಯ ಗಣೇಶ್ ರೈ ಆನಾಜೆ ಅವರು ತನ್ನ ತೋಟದ ನಡುವೆಯೇ ರಸ್ತೆ ನಿರ್ಮಿಸಿಕೊಟ್ಟರು. ಆ ರಸ್ತೆಗೆ ಶ್ರೀನಿವಾಸ ರಸ್ತೆ ಎಂದೇ ದರ್ಗಾದವರೂ ಗೌರವ ನೀಡುತ್ತಿದ್ದಾರೆ. ಊರೂಸ್ ಸಮಾರಂಭಕ್ಕೂ ಜಾಗದ ಮಾಲಕರನ್ನು ಗೌರವದಿಂದ ಬರಮಾಡಿಕೊಳ್ಳುವ ಪದ್ಧತಿ ಇಲ್ಲಿನದ್ದು