Nivin Pauly: ಅತ್ಯಾಚಾರ ಆರೋಪ, ಪೊಲೀಸರಿಗೆ ಸಾಕ್ಷ್ಯ ಕೊಟ್ಟ ನಟ, ಉಲ್ಟಾ ಹೊಡೆದ ಯುವತಿ


Nivin Pauly: ಮಲಯಾಳಂ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಆರೋಪವನ್ನು ಯುವತಿಯೊಬ್ಬರು ಮಾಡಿದ್ದು ದೂರು ಸಹ ದಾಖಲಿಸಿದ್ದಾರೆ. ಇದೀಗ ನಟ ನಿವಿನ್ ಪೌಲಿ, ಯುವತಿಯ ಆರೋಪ ಸುಳ್ಳೆಂದು ಸಾಬೀತು ಮಾಡಲು ಪ್ರಮುಖ ಸಾಕ್ಷ್ಯವೊಂದನ್ನು ಪೊಲೀಸರಿಗೆ ನೀಡಿದ್ದಾರೆ. 

ಹಲವು ಹಿರಿಯ ನಟ, ನಿರ್ದೇಶಕರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಕೆಲವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಫ್​ಐಆರ್ ಸಹ ದಾಖಲಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಕೆಲ ನಟಿಯರು, ಯುವತಿಯರು ಸೆಲೆಬ್ರಿಟಿಗಳ ಮೇಲೆ ಸುಳ್ಳು ಪ್ರಕರಣ ಸಹ ದಾಖಲಿಸಲು ಮುಂದಾಗಿದ್ದಾರೆ. ಕೆಲವರು ಬ್ಲ್ಯಾಕ್​ಮೇಲ್ ಸಹ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಹೇಮಾ ವರದಿ ಬಿಡುಗಡೆ ಆಗಿ ಸದ್ದು ಮಾಡುತ್ತಿರುವಾಗಲೇ ಕೆಲ ದಿನದ ಹಿಂದೆ ಯುವತಿಯೊಬ್ಬಾಕೆ, ಮಲಯಾಳಂ ಚಿತ್ರರಂಗದ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಕೇರಳದ ಎರ್ನಾಕುಲಂನ ಒನ್ನುಕುಲ್ ನಿವಾಸಿಯಾಗಿದ್ದ ಯುವತಿ, ತಮಗೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಿವಿನ್ ಪೌಲಿ, ಸಿನಿಮಾದ ನಿರ್ಮಾಪಕ, ನಿರ್ದೇಶಕ ಮತ್ತಿತರರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದರು. ಅತ್ಯಾಚಾರವು ದುಬೈನ ಹೋಟೆಲ್ ಒಂದರಲ್ಲಿ ನಡೆದಿತ್ತು ಎಂದಿದ್ದ ಯುವತಿ, ದೂರಿನಲ್ಲಿ ದಿನಾಂಕವನ್ನು ಸಹ ನಮೂದು ಮಾಡಿದ್ದರು.

ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದ ನಿವಿನ್ ಪೌಲಿ, ಆರೋಪಗಳೆಲ್ಲ ಸುಳ್ಳು ಎಂದಿದ್ದರು ಮಾತ್ರವಲ್ಲದೆ, ಈ ಆರೋಪಗಳನ್ನು ಸುಳ್ಳೆಂದು ಸಾಬೀತು ಮಾಡಲು ತಾವು ಏನು ಬೇಕಾದರೂ ಮಾಡುವುದಾಗಿ ಹಾಗೂ ತಮ್ಮ ಮೇಲೆ ಸುಳ್ಳು ಆರೋಪ ಮಾಡಿ ಮಾನಹಾನಿಗೆ ಯತ್ನಿಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದರು. ಅದರಂತೆ ಇದೀಗ ನಿವಿನ್ ಪೌಲಿ ಪೊಲೀಸರಿಗೆ ಕೆಲ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ.


ಯುವತಿ ದೂರಿನಲ್ಲಿ ಉಲ್ಲೇಖಿಸಿರುವ ದಿನಾಂಕ ಅಸಲಿಗೆ ನಿವಿನ್ ಪೌಲಿ ದುಬೈನಲ್ಲಿ ಇರಲೇ ಇಲ್ಲ ಬದಲಿಗೆ ಭಾರತದಲ್ಲಿಯೇ ಇದ್ದರು. ಇದಕ್ಕೆ ಸಂಬಂಧಿಸಿದಂತೆ ತಮ್ಮ ಪಾಸ್​ಪೋರ್ಟ್ ದಾಖಲೆಗಳ ಕಾಪಿಯನ್ನು ನಿವಿನ್ ಪೌಲಿ ಪೊಲೀಸರಿಗೆ ಒದಗಿಸಿದ್ದಾರೆ. ಮಾತ್ರವಲ್ಲದೆ ದೂರು ನೀಡಿರುವ ಯುವತಿಯ ವಿರುದ್ಧ ಪ್ರತಿದೂರು ನೀಡಿರುವ ನಿವಿನ್ ಪೌಲಿ, ಮಾನಹಾನಿ ಪ್ರಕರಣ ದಾಖಲಿಸುವುದಾಗಿಯೂ ಹೇಳಿದ್ದಾರೆ.

ನಿವಿನ್ ಪೌಲಿ, ಪಾಸ್​ಪೋರ್ಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಯುವತಿ, ನಾನು ದೂರಿನಲ್ಲಿ ಯಾವುದೇ ದಿನಾಂಕವನ್ನು ನಮೂದು ಮಾಡಿಲ್ಲ ಆದರೆ ಮಾಧ್ಯಮಗಳೊಟ್ಟಿಗೆ ಮಾತನಾಡುವಾಗ ದಿನಾಂಕವೊಂದನ್ನು ಹೇಳಿದ್ದೆ, ಆದರೆ ನಾನು ಆ ದಿನಾಂಕವನ್ನು ತಪ್ಪಾಗಿ ಹೇಳಿದ್ದೆ. ಅರೆನಿದ್ದೆಯಲ್ಲಿದ್ದಾಗ ನಾನು ಆ ದಿನಾಂಕವನ್ನು ಹೇಳಿದ್ದೆ. ಈಗ ನಾನು ಬೇರೆ ದಿನಾಂಕವನ್ನು ಪೊಲೀಸರಿಗೆ ಹೇಳಿದ್ದೇನೆ. ಹೇಗೋ ನಿವಿನ್ ಪೌಲಿ ಪಾಸ್​ಪೋರ್ಟ್ ನೀಡಿದ್ದಾರೆ. ನಾನೂ ಸಹ ನನ್ನ ಪಾಸ್​ಪೋರ್ಟ್ ನೀಡಿದ್ದೇನೆ. ಪೊಲೀಸರು ತನಿಖೆ ಮುಂದುವರೆಸಲಿ' ಎಂದಿದ್ದಾರೆ.

Next Post Previous Post

Announcement