ರೈತ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR ಎಫ್ಐಆರ್




ಮಂಗಳೂರು: ರೈತ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಸುದ್ದಿ ಪ್ರಕಟಿಸಿದ್ದ ಆರೋಪದಡಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಇಬ್ಬರು ಸಂಪಾದಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

'ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಕನ್ನಡ ದುನಿಯಾ ಹಾಗೂ ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮಗಳ ಇ-ಪೇಪರ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು.

ಈ ಬಗ್ಗೆ ಪರಿಶೀಲಿಸಿ ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ' ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ತಿಳಿಸಿದರು.

'ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು‌ ಮೊದಲ ಆರೋಪಿಯಾಗಿ ಮಾಡಲಾಗಿದೆ. ಕನ್ನಡ ದುನಿಯಾ ಮಾಧ್ಯಮ ಹಾಗೂ ಕನ್ನಡ ನ್ಯೂಸ್ ಸಂಪಾದಕರನ್ನು ಕ್ರಮವಾಗಿ ಎರಡು-ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. ಮೂವರಿಗೂ ಸದ್ಯದಲ್ಲೇ ನೋಟಿಸ್ ನೀಡಿ ವಿಚಾರಣೆ ನಡೆಸಿ‌ ಮುಂದಿನ ಕ್ರಮ ಜರುಗಿಸಲಾಗುವುದು' ಎಂದು ಹೇಳಿದರು.

'ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಹಾಗೂ ದ್ವೇಷ ಉಂಟು ಮಾಡಲು ಪ್ರಚೋದಿಸುವ ಸುಳ್ಳು ಸುದ್ದಿ (ಬಿಎನ್‌ಎಸ್ 353 (2) ಹರಿಬಿಟ್ಟ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ' ಎಂದು ತಿಳಿಸಿದರು.

'4 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದು ನಮೂದು ಆಗಿದ್ದರಿಂದ ಮನನೊಂದು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಕ್ಫ್ ನೋಟಿಸ್ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು. ಇದೇ ಸುದ್ದಿಯನ್ನು 'ಎಕ್ಸ್'ನಲ್ಲಿ ಟ್ಯಾಗ್ ಮಾಡಿದ್ದ ತೇಜಸ್ವಿ ಸೂರ್ಯ, ಸುಳ್ಳು ಸುದ್ದಿ ಹರಿಬಿಟ್ಟಿದ್ದರು' ಎಂದು ಎಸ್ಪಿ ತಿಳಿಸಿದರು.

Next Post Previous Post

Announcement