ಮಂಗಳೂರು, ಮೇ 03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ(Suhas Shetty) ಕೊಲೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರು ಮಹತ್ವದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ (Anupam Agarwal) , ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದು, ಬಂಧಿತರ ವಿವರ ನೀಡಿದ್ದಾರೆ.
ಯಾರೆಲ್ಲಾ ಅರೆಸ್ಟ್?
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿರುವಂತೆ ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳಿದ್ದಾರೆ. ಅವರ ವಿವರನ್ನು ನೀಡಿದ್ದಾರೆ. ಅಬ್ದುಲ್ ಸಫ್ವಾನ್ (29), ನಾಗರಾಜ್ (20), ನಿಯಾಜ್ (28), ರಂಜಿತ್ (19), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ ಬಂಧಿತರು.
ಇದಕ್ಕೂ ಮುನ್ನ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೃತ್ಯದಲ್ಲಿ ಭಾಗವಹಿಸಿದ ಎಂಟು ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದರು. ಅವರೆಲ್ಲರೂ ಈಗ ಪೊಲೀಸ್ ಕಸ್ಡಡಿಯಲ್ಲಿ ಇದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ನಡೀತಾ ಇದೆ. ಸಿಕ್ಕಿದ ಎಂಟು ಜನರ ತನಿಖೆ ಆಗ್ತಿದೆ. ಸುಹಾಸ್ ಶೆಟ್ಟಿ ಘಟನೆ ಮತ್ತು ನಾಲ್ಕು ದಿನದ ಹಿಂದಿನ ಅಶ್ರಫ್ ಕೊಲೆ ಮತ್ತೆ ಇಲ್ಲಿ ಕೋಮು ಸೌಹಾರ್ದಕ್ಕೆ ಸವಾಲಾಗಿದೆ. ಸುಹಾಸ್ ಶೆಟ್ಟಿ ಕೇಸ್ ನಲ್ಲಿ ಎಂಟು ಜನರು ಹಾಗೂ ಅಶ್ರಫ್ ಕೇಸ್ ನಲ್ಲಿ 21 ಜನರ ಬಂಧನ ಆಗಿದೆ. ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡಲು ಬಿಡಲ್ಲ ಎಂದಿದ್ದಾರೆ.
ಮೊದಲೇ ನಡೆದಿತ್ತಾ ಪ್ಲಾನ್, ಕಳಸದ ಇಬ್ಬರು ಹಿಂದೂ ಯುವಕರು ಊರು ಬಿಟ್ಟಿದ್ಯಾಕೆ?
ಕೊಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಇಬ್ಬರು ಯುವಕರ ಹೆಸರು ಮುನ್ನಲೆಗೆ ಬಂದಿರುವ ಹಿನ್ನೆಲೆ ಸುಹಾಸ್ ಕೊಲೆಗೆ ತಿಂಗಳಿಂದ ನಡೆದಿತ್ತಾ ಸಂಚು? ಎಂಬ ಶಂಕೆ ದಟ್ಟವಾಗಿದೆ. ರಂಜಿತ್ ಮತ್ತು ನಾಗರಾಜ್ ಎಂಬ ಕಳಸದ ಯುವಕರು ಕೆಲಸ ಬಿಟ್ಟು ತಿಂಗಳ ಹಿಂದೆಯೇ ಮಂಗಳೂರು ಸೇರಿದ್ದರು. ಕಳಸ ಪಟ್ಟಣದ ಶಾಮಿಯಾನದಲ್ಲಿ ಕೆಲಸ ಮಾಡುತ್ತಿದ್ದರು. ಸದಾ ಮದ್ಯ ಸೇವಿಸುತ್ತಿದ್ದ ಇಬ್ಬರು ಯುವಕರು ಮದ್ಯಪಾನದ ದಾಸರಾಗಿದ್ದರು ಎಂದು ತಿಳಿದುಬಂದಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಿಷ್ಟು
ಇನ್ನು ಪೊಲೀಸ್ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೋಮು ಸಂಘರ್ಷ ತಡೆಗೆ ಐಜಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಆಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಸ್ಥಾಪಿಸಲಾಗುತ್ತೆ. ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದೇನು?
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ.
ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ಈ 5 ಲಕ್ಷ ರೂಪಾಯಿಗಾಗಿ ಆದಿಲ್ ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.