ಸುಹಾಸ್ ಶೆಟ್ಟಿ ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣ, ಹೊರತು ಧಾರ್ಮಿಕ ಹಿನ್ನೆಲೆಯಲ್ಲ: ಸ್ಪೀಕರ್ ಯುಟಿ ಖಾದರ್


ಬೆಂಗಳೂರು: ನಿನ್ನೆ ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಸ್ಪೀಕರ್ ಯುಟಿ ಖಾದರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯನ್ನು ವೈಯಕ್ತಿಕ ದ್ವೇಷದಿಂದ ಕೂಡಿದ ಗುಂಪುಗಳ ನಡುವಿನ ಘರ್ಷಣೆ ಎಂದು ವಿವರಿಸಿರುವ ಅವರು, ಇದು ಧಾರ್ಮಿಕ ದ್ವೇಷಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

Ad 1
ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಸುಹಾಸ್ ಶೆಟ್ಟಿ, ಈ ಹಿಂದೆ ಕೀರ್ತಿ ಹತ್ಯೆ ಪ್ರಕರಣ ಹಾಗೂ ಫಾಜಿಲ್ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿದ್ದ. ಈ ಕೊಲೆಗೆ ಕಾರಣ ವೈಯಕ್ತಿಕ ದ್ವೇಷ ಎಂದರು. ಇನ್ನು ಹತ್ಯೆ ಮಾಡಿದ ಆರೋಪಿಗಳು ಯಾವ ಕೇಸ್‌ಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿಯಲಿದೆ ಎಂದರು.

ಆರೋಪಿಗಳನ್ನು ಯಾರೇ ಆಗಿರಲಿ, ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಫಾಜಿಲ್ ಕೊಲೆಗೆ ಪ್ರತಿಕಾರ ಎಂಬ ಭಾವನೆ ಕೆಲವರಲ್ಲಿದೆ, ಆದರೆ ಇದು ಪ್ರತೀಕಾರ ಅಲ್ಲ. ಈ ಬಗ್ಗೆ ಫಾಜಿಲ್ ಕುಟುಂಬವು ಈ ಘಟನೆಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದರು.

ಕರಾವಳಿಯ ಪರಂಪರೆಯನ್ನು ಕಾಪಾಡಿಕೊಂಡು, ನಮ್ಮ ಜಿಲ್ಲೆಯನ್ನು ನಾವು ಮುಂದೆ ತೆಗೆದುಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು. ಯಾವುದೇ ಸಮಾಜ ಅಥವಾ ಧರ್ಮದ ಹೆಸರಿನಲ್ಲಿ ಮಂಗಳೂರನ್ನು ಹಿಂದಕ್ಕೆ ತಳ್ಳಬಾರದು. ರಾಜಕೀಯವಾಗಿ ನಾನು ಉತ್ತರ ಕೊಡಲ್ಲ. ಯಾರೆಲ್ಲ ಆರೋಪ ಮಾಡುತ್ತಿದ್ದಾರೆ ಆತ್ಮಾವಲೋಕನ ಮಾಡಿಕೊಳ್ಳಲಿ. ರಾಜಕೀಯವಾಗಿ ಈ ಘಟನೆಯನ್ನು ಯಾರೂ ಬಳಸಿಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.
Next Post Previous Post

Announcement