Uttara Koriya: ಪ್ರವಾಹ ನಿರ್ವಹಣೆಯಲ್ಲಿ ವಿಫಲ; 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ


ನವದೆಹಲಿ: ನಾರ್ಥ್ ಕೊರಿಯಾ ಎಂದಾಕ್ಷಣ ಮೊದಲಿಗೆ ನಮಗೆ ನೆನಪಾಗುವುದು ಅಲ್ಲಿನ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌. ಚಿತ್ರ-ವಿಚಿತ್ರ ಕಾನೂನು, ಕಟ್ಟುನಿಟ್ಟಾದ ನಿಯಮಕ್ಕೆ ಹೆಸರುವಾಸಿಯಾಗಿರುವ ಈ ದೇಶವು ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಆಡಳಿತವಿದ್ದು, ಸರ್ಕಾರ ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳನ್ನು ಇಲ್ಲಿನ ನಾಗರೀಕರು ವಿಧಿಯಿಲ್ಲದೆ ಪಾಲಿಸಬೇಕಾಗುತ್ತದೆ.

ಇಲ್ಲದಿದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಂಡಿತ. ಈ ವಿಚಾರವಾಗಿ ಹಲವು ಬಾರಿ ಇಲ್ಲಿನ ಅಧ್ಯಕ್ಷ ಕಿಮ್​ ಜಾಂಗ್​ ಉನ್​ ಸುದ್ದಿಯಾಗಿದ್ದಾರೆ. ಇದೀಗ ಅಧಿಕಾರಿಗಳನ್ನು ಗಲ್ಲಿಗೇರಿಸುವ ಮೂಲಕ ಕಿಮ್​ ಸುದ್ದಿಯಾಗಿದ್ದಾರೆ.

ಜುಲೈ ತಿಂಗಳ ಅಂತ್ಯದಲ್ಲಿ ದೇಶಾದ್ಯಂತ ಸುರಿದ ಭಾರೀ ಮಳೆಗೆ ದೊಡ್ಡ ಮಟ್ಟದಲ್ಲಿ ಪ್ರವಾಹ ಉಂಟಾಗಿತ್ತು. ಮಳೆ ಸಂಬಂಧಿತ ಅವಘಡಗಳಲ್ಲಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಜನರ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಇಲ್ಲಿನ ಅಧ್ಯಕ್ಷ ಕಿಮ್​ ಜಾಂಗ್​ ಉನ್​ 30 ಮಂದಿ ಅಧಿಕಾರಿಗಳನ್ನು ಗಲ್ಲಿಗೇರಿಸಿರುವುದಾಗಿ ವರದಿಯಾಗಿದೆ.

ಉತ್ತರ ಕೊರಿಯಾದಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಭೂ ಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಈ ನೈಸರ್ಗಿಕ ವಿಕೋಪದ ಕಾರಣ ಹಲವಾರು ಸಾವು ನೋವುಗಳು ಸಂಭವಿಸಿದೆ. ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕೋಪಗೊಂಡ ಕಿಮ್‌ ಜಾಂಗ್‌ ಉನ್‌ ಇಲ್ಲಿನ ಒಟ್ಟು 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ ಭೀಕರ ಪ್ರವಾಹದಲ್ಲಿ 4 ಸಾವಿರಕ್ಕೂ ಹೆಚ್ಚು ಜನ ಪ್ರಾಣವನ್ನು ಕಳೆದುಕೊಂಡಿದ್ದು, 15 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಕಿಮ್ ಜಾಂಗ್‌ ಉನ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಪ್ರವಾಹ ಸಂದರ್ಭದಲ್ಲಿ ಅಧಿಕಾರಿ ತೋರಿದ ನಿರ್ಲಕ್ಷ್ಯದ ಕಾರಣಕ್ಕೆ 30 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪ ಹೊರಿಸಿ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Next Post Previous Post

Announcement