BREAKING: ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ ಡಿಜಿ-ಐಜಿಪಿ ಯಾಗಿ ಕನ್ನಡಿಗ ಎಂ.ಎ.ಸಲೀಂ ನೇಮಕಗೊಳ್ಳುವ ಸಾಧ್ಯತೆ..!!


ಮಂಗಳೂರು: ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ ಡಿಜಿ-ಐಜಿಪಿ ಯಾಗಿ ಸಿಐಡಿ ಡಿಜಿಪಿ ಎಂ.ಎ.ಸಲೀಂ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಈ ನಿರ್ಧಾರ ತೆಗೆದುಕೊಂಡರೆ ದಶಕಗಳ ಬಳಿಕ ಕನ್ನಡಿಗ ಐಪಿಎಸ್‌ ಅಧಿಕಾರಿಯೊಬ್ಬರು ಈ ಮಹತ್ವದ ಹುದ್ದೆಗೆ ಏರಿದಂತಾಗಲಿದೆ.


ಹಾಲಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೇವಾವಧಿ ಎ. 30ಕ್ಕೆ ಅಂತ್ಯಗೊಳ್ಳಲಿದೆ. ಅವರು ಸೇವಾ ವಿಸ್ತರಣೆ ಬಯಸಿದ್ದು, ಸಿಎಂ ಹಾಗೂ ಡಿಸಿಎಂಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೂ ಮೊರೆ ಹೊಕ್ಕಿದ್ದಾರೆ. ಆದರೆ ಸಿಎಂ ಅಳೆದು ತೂಗಿ ಒಂದು ನಿರ್ಧಾರಕ್ಕೆ ಬಂದಿದ್ದು, ಸಲೀಂ ಪರ ಒಲವು ತೋರಿದ್ದಾರೆ.



ಸೇವಾ ಜ್ಯೇಷ್ಠತೆಯಲ್ಲಿ ಅಗ್ನಿಶಾಮಕ ಹಾಗೂ ಪೌರ ರಕ್ಷಣೆ ಡಿಜಿಪಿಯಾಗಿರುವ ಪ್ರಶಾಂತ್‌ ಕುಮಾರ್‌ ಠಾಕೂರ್‌ ಹಾಗೂ ಎಂ.ಎ.ಸಲೀಂ ಈ ಹುದ್ದೆಯ ರೇಸ್‌ನಲ್ಲಿದ್ದಾರೆ. ನಿಯಮ ಪ್ರಕಾರ ಮೂವರು ಡಿಜಿಪಿ ದರ್ಜೆಯ ಅಧಿಕಾರಿಯನ್ನು ಸರಕಾರ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಯ ಪ್ಯಾನಲ್‌ನಲ್ಲಿ ಸೇರಿಸಬೇಕಾಗುತ್ತದೆ. ಈ ಪೈಕಿ ಪೊಲೀಸ್‌ ಗೃಹಮಂಡಳಿ ಡಿಜಿಪಿಯಾಗಿದ್ದ ಡಾ| ಕೆ.ರಾಮಚಂದ್ರ ರಾವ್‌ ಅವರಿಗೆ ರನ್ಯಾ ರಾವ್‌ ಪ್ರಕರಣದಲ್ಲಿ ಸರಕಾರ ಕಡ್ಡಾಯ ರಜೆ ನೀಡಿದೆ. ಹೀಗಾಗಿ ಅವರು ಈ ಸಂಭಾವ್ಯರ ಪಟ್ಟಿಯಲ್ಲಿ ಬರಲು ಸಾಧ್ಯವಿಲ್ಲ.



ಸಲೀಂ ಹಾಗೂ ರಾಮಚಂದ್ರ ರಾವ್‌ 1993ರ ಬ್ಯಾಚ್‌ ಐಪಿಎಸ್‌ ಅಧಿಕಾರಿಗಳಾಗಿದ್ದರೆ, ಪ್ರಶಾಂತ್‌ ಕುಮಾರ್‌ ಠಾಕೂರ್‌ 1992ನೇ ಬ್ಯಾಚ್‌. 1993ನೇ ಬ್ಯಾಚ್‌ನ ಇನ್ನೊಬ್ಬ ಮಹಿಳಾ ಅಧಿಕಾರಿ ಮಾಲಿನಿಕೃಷ್ಣ ಮೂರ್ತಿ ಜುಲೈಯಲ್ಲಿ ನಿವೃತ್ತಿಯಾಗುವುದರಿಂದ ಸರಕಾರ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ. ಸೇವಾ ಜ್ಯೇಷ್ಠತೆ ವಿಷಯವನ್ನೇ ಪ್ರಧಾನವಾಗಿ ಪರಿಗಣಿಸಿ ದರೆ ಪ್ರಶಾಂತ್‌ ಕುಮಾರ್‌ ಮುನ್ನೆಲೆಗೆ ಬರಲಿದ್ದಾರೆ.



ಕನ್ನಡಿಗನಿಗೆ ಮಣೆ ?
ಶಂಕರ ಮಹದೇವ ಬಿದರಿ ಬಳಿಕ ಕನ್ನಡಿಗ ಐಪಿಎಸ್‌ ಅಧಿಕಾರಿಗಳ್ಯಾರು ಪೊಲೀಸ್‌ ಮಹಾನಿರ್ದೇಶಕ ಹುದ್ದೆಗೆ ಏರಿಲ್ಲ. ಬಿದರಿ ಬಳಿಕ ಪಚಾವೋ, ಓಂ ಪ್ರಕಾಶ್‌ ರಾವ್‌, ನೀಲಮಣಿ ರಾಜು, ಆರ್‌.ಕೆ.ದತ್ತ, ಪ್ರವೀಣ್‌ ಸೂದ್‌ ಹಾಗೂ ಅಲೋಕ್‌ ಮೋಹನ್‌ ಡಿಜಿಪಿ ಹುದ್ದೆಗೆ ಏರಿದ್ದರು. ಇದಾದ ಬಳಿಕ ಕರ್ನಾಟಕದ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಪೊಲೀಸ್‌ ಮಹಾನಿರ್ದೇಶಕರ ಹುದ್ದೆ ಅಲಂಕರಿಸುವ ಅವಕಾಶ ಸೃಷ್ಟಿಯಾಗಿದ್ದು, ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.


Next Post Previous Post

Announcement