ಮಂಗಳೂರು: ಕುಡುಪು ಗುಂಪು ಹತ್ಯೆ ಪ್ರಕರಣ : ಮೃತನ ಗುರುತು ಪತ್ತೆ | ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ನಿವಾಸಿ ಅಶ್ರಫ್ ಮೃತಪಟ್ಟ ವ್ಯಕ್ತಿ
ಮಂಗಳೂರು: ನಗರ ಹೊರವಲಯದ ಕುಡುಪು ಬಳಿ ರವಿವಾರ ಸಂಜೆ ಗುಂಪು ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳ ರಾಜ್ಯದ ನಿವಾಸಿ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿ ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ನಿವಾಸಿ ಅಶ್ರಫ್ ಎಂದು ಗುರುತಿಸಿರುವುದಾಗಿ ತಿಳಿದು ಬಂದಿದೆ.
ಮೃತದೇಹದ ಗುರುತು ಪತ್ತೆಹಚ್ಚಲು ಅಶ್ರಫ್ ಅವರ ಪುತ್ರ ಜಬ್ಬಾರ್ ಎಂಬವರು ವಯನಾಡಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು ಕೆಲವೇ ಗಂಟೆಗಳಲ್ಲಿ ಮಂಗಳೂರು ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿ ಮಲಯಾಳಂ ಮಾತನಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದ್ದರಿಂದ ಮಂಗಳೂರು ಪೊಲೀಸರು ಕೇರಳ ಪೊಲೀಸರನ್ನು ಸಂಪರ್ಕಿಸಿದ್ದು ಆ ಮೂಲಕ ಮೃತನ ಗುರುತು ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ
ವಯನಾಡು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುತ್ತಿದ್ದು ಈ ಗುಂಪು ಹತ್ಯೆ ಬಗ್ಗೆ ಪ್ರಿಯಾಂಕಾ ಗಾಂಧಿ ಅವರಿಗೆ ಮಾಹಿತಿ ರವಾನಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧನ ಮಾಡಲಾಗಿದೆ.
ಆರೋಪಿಗಳಾದ ಕುಡುಪು ಮತ್ತು ಸುತ್ತಮುತ್ತಲಿನ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, 30 ಜನರ ಗುಂಪಿನಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿರುವುದು ಖಚಿತವಾಗಿದೆ ಎಂದು ಹೇಳಿದರು. ಅದರಲ್ಲಿ 25ಕ್ಕೂ ಹೆಚ್ಚು ಆರೋಪಿಗಳ ಗುರುತು ಪತ್ತೆ ಮಾಡಿದ್ದು, 15 ಮಂದಿಯನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಆರೋಪಿಗಳು ಹಲ್ಲೆಯ ಬಗ್ಗೆ ಒಪ್ಪಿಕೊಂಡಿದ್ದು, ಆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಎ.27ರಂದು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭ ಅಪರಿಚಿತ ವ್ಯಕ್ತಿಗೆ ಯಾವುದೋ ಮಾತಿಗೆ ಸಂಬಂಧಿಸಿ ಸಚಿನ್ ಟಿ. ಎಂಬಾತ ಜಗಳಕ್ಕೆ ಮುಂದಾದಾಗ ಸಹಚರರು ಕೂಡಾ ಜತೆ ಸೇರಿ ಹಲ್ಲೆ ನಡೆಸಿದ್ದಾರೆ. ಆತ ಓಡಿಹೋಗಲು ಯತ್ನಿಸಿದಾಗ ಸುಮಾರು 30 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ.
ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದರು. ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ದೀಪಕ್ ಕುಮಾರ್ ಎಂಬವರು 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 37/2025, ಕಲಂ 102 (2), 189 (2),191 (1), 191(3), 240 ಭಾರತೀಯ ನ್ಯಾಯ ಸಂಹಿತೆ 2023 (ಬಿಎನ್‌ಎಸ್ 2023) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಹತ್ಯೆಗೊಳಗಾದ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ ಎಂದು ತಿಳಿಸಿದರು.