SUPREME COURT : ಭಾರತದಲ್ಲೇ ಹುಟ್ಟಿದ ಉರ್ದು ಭಾಷೆ ಯಾವುದೇ ಧರ್ಮಕ್ಕೆ ಸೇರಿದ್ದಲ್ಲ - ಬೋರ್ಡ್ ನಲ್ಲಿ ಉರ್ದು ವಿವಾದಕ್ಕೆ ಸುಪ್ರೀಂ ಕೋರ್ಟ್ ಕಿಡಿ!
ನವದೆಹಲಿ: ಉರ್ದುವನ್ನು ಕೇವಲ ಮುಸ್ಲಿಮರ ಭಾಷೆ ಎಂದು ಪರಿಗಣಿಸುವುದು ವಾಸ್ತವಕ್ಕೆ ದೂರವಾದದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾಟುರ್‌ನ ಪುರಸಭೆ ನಾಮಫಲಕದಲ್ಲಿ ಮರಾಠಿ ಜತೆಗೆ ಉರ್ದು ಭಾಷೆ ಬಳಸಿದ್ದನ್ನು ಪ್ರಶ್ನಿಸಿ, ಪುರಸಭೆ ಮಾಜಿ ಕೌನ್ಸಿಲರ್ ವರ್ಷಾತಾಯಿ ಸಂಜಯ್ ಬಗಡೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪುರಸಭೆಯ ಕಾರ್ಯಗಳು ಮರಾಠಿಯಲ್ಲಿ ಮಾತ್ರ ನಡೆಯಬೇಕು. ನಾಮಫಲಕದಲ್ಲಿ ಉರ್ದು ಬಳಸುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ದ್ವಿಸದಸ್ಯ ಪೀಠ, 'ಭಾಷೆಯನ್ನು ಧರ್ಮವೆಂದು ಪರಿಗಣಿಸುವುದು ಸೂಕ್ತವಲ್ಲ' 'ಇಂತಹ ನಂಬಿಕೆಗಳು ವಿವಿಧತೆಯಲ್ಲಿ ಏಕತೆಯನ್ನು ದುರ್ಬಲಗೊಳಿಸುತ್ತವೆ' ಎಂದು ಅಭಿಪ್ರಾಯಪಟ್ಟಿದೆ.
'ಭಾಷೆ ಧರ್ಮವಲ್ಲ. ಅದು ಧರ್ಮವನ್ನು ಪ್ರತಿನಿಧಿಸುವುದಿಲ್ಲ. ಉರ್ದು ಭಾಷೆಯನ್ನು ಕೇವಲ ಮುಸ್ಲಿಮರಿಗೆ ಸಿಮೀತಗೊಳಿಸುವುದು ಸರಿಯಲ್ಲ. ಭಾಷೆಯು ಒಂದು ಸಮುದಾಯಕ್ಕೆ, ಒಂದು ಪ್ರದೇಶಕ್ಕೆ ಮತ್ತು ಆ ಪ್ರದೇಶದ ಜನರಿಗೆ ಸೇರಿದ್ದು. ಭಾಷೆ, ಸಂಸ್ಕೃತಿ ಒಂದು ಸಮುದಾಯದ ನಾಗರಿಕತೆಯ ಪ್ರಗತಿಯನ್ನು ಅಳೆಯುವ ಸಾಧನ. ಉರ್ದು ಭಾಷೆಯು ಗಂಗಾ-ಜಮುನಾ ಸಭ್ಯತೆಗೆ ಅತ್ಯುತ್ತಮ ಉದಾಹರಣೆ. 'ಉರ್ದು ಭಾಷೆಯು ಉತ್ತರ ಮತ್ತು ಮಧ್ಯ ಭಾರತದ ಸಂಯೋಜಿತ ಸಾಂಸ್ಕೃತಿಕ ನೀತಿಯಾಗಿದೆ' ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
'ಪಾಟುರ್ ಪುರಸಭೆಯ ವ್ಯಾಪ್ತಿಯಲ್ಲಿ ಅನೇಕ ಜನರಿಗೆ ಉರ್ದು ಭಾಷೆ ತಿಳಿದಿದೆ. ಹಾಗಾಗಿ ಪುರಸಭೆಯು ನಾಮಫಲಕದಲ್ಲಿ ಉರ್ದು ಭಾಷೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ವಿವಿಧತೆಯಲ್ಲಿ ಏಕತೆಯ ಸಿದ್ಧಾಂತದ ಮೇಲಿನ ನಂಬಿಕೆ ಕಳೆದುಕೊಂಡಿರುವ ಸಂಕೇತ' ಎಂದು ಕೋರ್ಟ್ ಹೇಳಿದೆ.
'ಮರಾಠಿ ಮತ್ತು ಹಿಂದಿಯಂತೆ ಉರ್ದು ಕೂಡ ಇಂಡೋ-ಆರ್ಯನ್ ಭಾಷೆ. ಇದು ಭಾರತದಲ್ಲಿ ಹುಟ್ಟಿದ ಭಾಷೆ. ವಿಭಿನ್ನ ಸಂಸ್ಕೃತಿಗಳ ಜನರು ತಮ್ಮ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಸಂವಹನ ನಡೆಸಲು ಉರ್ದು ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ಇದನ್ನೇ ಪಾಟುರ್ ಪುರಸಭೆ ಮಾಡಿದ್ದು, ಜನರೊಂದಿಗೆ ಉತ್ತಮ ಸಂವಹನ ಕಾಯ್ದುಕೊಳ್ಳುವ ಅದರ ನಿರ್ಧಾರ ಮೆಚ್ಚುಗೆಗೆ ಅರ್ಹ' ಎಂದು ಸುಪ್ರೀಂಕೋರ್ಟ್ ಹೇಳಿದೆ..