ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮೇ 26ರವರೆಗೂ ಮುಂದುವರಿಯಲಿದೆ ಭಾರಿ ಮಳೆ


ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಪೂರ್ವ ಮುಂಗಾರಿನ ಮಳೆಯು ಕೊಂಚ ತಗ್ಗಿದೆ. ಆದರೆ, ಮೇ 26ರ ವರೆಗೂ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಜೂನ್‌ 5ರಿಂದ ಇಡೀ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದ್ದು, ನಂತರ ಮಳೆಗಾಲ ಶುರುವಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.


ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಪೂರ್ವ ಅರಬ್ಬಿ ಸಮುದ್ರದ ಕರ್ನಾಟಕ ಹಾಗೂ ಗೋವಾ ಕರಾವಳಿ ತೀರದಲ್ಲಿ ಸರ್ಕ್ಯೂಲೇಶ್‌ 5.8 ಕಿ.ಮೀ ಎತ್ತರದಲ್ಲಿದೆ. ಇದರ ಪ್ರಭಾವದಿಂದಾಗಿ ಮೇ 26ರ ವರೆಗೆ ರಾಜ್ಯಾದ್ಯಂತ ಗುಡುಗು, ಮಿಂಚು ಸಮೇತ ವ್ಯಾಪಕವಾಗಿ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ.


13 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ:

ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಮಳೆಯು ಕಡಿಮೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಜಿಲ್ಲೆಗಳಿಗೆ ಮೇ 26ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಗಾಳಿಯ ವೇಗವು ಪ್ರತಿ ಗಂಟೆಗೆ 50 ಕಿ.ಮೀ ಇರಲಿದೆ. ಗುರುವಾರ ರಾಜ್ಯಾದ್ಯಂತ ಹಲವು ಕಡೆ ವ್ಯಾಪಕ ಮಳೆಯಾಗಿದೆ. ಗದಗ, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು, ಮೈಸೂರಿನಲ್ಲಿ ಪ್ರತಿ ಗಂಟೆಗೆ 50 ಕಿ.ಮೀ ಗಾಳಿಯ ವೇಗವು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌.ಪಾಟೀಲ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 29ರ ವರೆಗೂ ಮಳೆ:
ಉತ್ತರ ಕನ್ನಡದಲ್ಲಿ ಮಾತ್ರ ಮಳೆಯ ಅಬ್ಬರ ಮುಂದುವರಿದಿದ್ದು, ಮೇ 29ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಮೇ 22ರಂದು ಉತ್ತರ ಕನ್ನಡದ ಕದ್ರದಲ್ಲಿ 12 ಸೆಂ.ಮೀ ಮಳೆಯಾಗಿದೆ. ಇದು ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಮಳೆಯಾಗಿದೆ. ಹೊನ್ನಾವರ, ಕಾರವಾರದಲ್ಲಿ 10 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಮೇ 25 ರಿಂದ ಮೇ 29ರ ವರೆಗೆ ಉತ್ತಮ ಮಳೆ ನಿರೀಕ್ಷಿಸಬಹುದಾಗಿದೆ. ಮೇ 22ರಂದು ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

Next Post Previous Post

Advertisement

Advertisement

. Advertisement