ಮೇ 29 ರಿಂದ ಶಾಲೆಗಳು ಪುನರಾರಂಭ..!! – ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ.!– ನೈತಿಕ ಶಿಕ್ಷಣ ಬೋಧನೆಗೆ ನಿರ್ಧಾರ: ಸಚಿವ ಮಧು ಬಂಗಾರಪ್ಪ
ಮೇ 29 ರಿಂದ ಶಾಲೆಗಳು ಪುನರಾರಂಭ..!!
– ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ.!
– ನೈತಿಕ ಶಿಕ್ಷಣ ಬೋಧನೆಗೆ ನಿರ್ಧಾರ: ಸಚಿವ ಮಧು ಬಂಗಾರಪ್ಪ
ಮಂಗಳೂರು: ಮೇ 29 ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭಗೊಳ್ಳಲಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರಿ ಶಾಲೆಗಳಿಗೆ ತೆರಳಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ ಆರಂಭೋತ್ಸವದ ದಿನದಂದೇ ಎಲ್ಲ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಗುತ್ತದೆ. ಶೂ, ಸಾಕ್ಸ್ ಹಂತಹಂತವಾಗಿ ಶಾಲೆಯಲ್ಲಿ ವಿತರಿಸಲಾಗುತ್ತಿದೆ. ಅದಕ್ಕೂ ಒಂದು ಕಠಿಣ ಕಾನೂನು ರೂಪಿಸಿ ಶಾಲಾ ಆರಂಭದಲ್ಲೇ ಮಕ್ಕಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಮುಖ್ಯಮಂತ್ರಿಗಳು ಶಾಲೆಗಳಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದು ಸೂಚಿಸಿದ್ದು, ಈ ಬಗ್ಗೆ ಮೇಲ್ಮನೆಯಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ.
ಈ ವರ್ಷ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪಿಯುಸಿ ಹಂತದಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಶಿಕ್ಷಣ ನೀಡುವ ಉದ್ದೇಶದಿಂದ ನೀತಿ ವಿಜ್ಞಾನ ಬೋಧಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 46 ಸಾವಿರ ಶಾಲೆಗಳಿದ್ದು, ಕೆಲವೊಂದು ಶಾಲೆಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಬಂದಿವೆ. ಅವುಗಳು ಮುಂದೆ ಬರದಂತೆ ನೋಡಿಕೊಳ್ಳಲಾಗುವುದು. ಮಕ್ಕಳು ಸ್ವಂತ ಶಕ್ತಿಯ ಮೇಲೆ ಪರೀಕ್ಷೆ ಬರೆಯುತ್ತಿದ್ದಾರೆ. ಕಾಪಿ ಹೊಡೆಯುವುದು ಕಡಿಮೆ ಆಗಿದೆ. ದೇಶದಲ್ಲೇ ಮೊದಲು ನಮ್ಮಲ್ಲಿ ಪರೀಕ್ಷಾ ವ್ಯವಸ್ಥೆಗೆ ವೆಬ್ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು, ಅದನ್ನು ಕೇಂದ್ರದ ಪರೀಕ್ಷೆಗಳಿಗೂ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.