ಬೆಳಗಾವಿ: ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್
ಸದ್ಯ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ :
ಮೇ 13ರಂದು ಮನೆಗೆ ಹೊರಟ ಬಾಲಕಿಯನ್ನು ಸ್ವಾಮೀಜಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಕುಟುಂಬಕ್ಕೆ ಪರಿಚಯಸ್ಥ ಸ್ವಾಮೀಜಿ ಆಗಿದ್ದರಿಂದ ಬಾಲಕಿ ಕಾರು ಹತ್ತಿದ್ದಳು. ಈ ವೇಳೆ ಮನೆ ಬಂದರೂ ಕಾರನ್ನು ನಿಲ್ಲಿಸದೇ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಮೂಲಕ ರಾಯಚೂರಿಗೆ ಬಾಲಕಿಯನ್ನು ಕರೆದೊಯ್ಯಲಾಗಿದೆ. ಈ ವೇಳೆ ರಾಯಚೂರು ನಗರದ ಲಾಡ್ಜ್ ಒಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಬಳಿಕ ಮೇ 16ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಸ್ವಾಮೀಜಿ ಬಿಟ್ಟು ಹೋಗಿದ್ದಾರೆ. ಈ ವಿಷಯ ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ಥೆ ಆರೋಪಿಸಿದ್ದಾರೆ.
ಘಟನೆಯಿಂದ ನೊಂದು ಬಾಲಕಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಕೂಡಲೇ ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಘಟನೆ ಮಾಹಿತಿ ಬೆನ್ನಟ್ಟಿದ ಪೊಲೀಸರು, ಸ್ವಾಮೀಜಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಎಸ್ಪಿ ಹೇಳಿದ್ದೇನು ? :
ಪ್ರಕರಣ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್, ಕಳೆದ ವಾರವೇ ಮೂಡಲಗಿ ಠಾಣೆಯಲ್ಲಿ ಆರೋಪಿ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಲೋಕೇಶ್ವರ ಸ್ವಾಮೀಜಿಯ ಬಂಧನವಾಗಿದೆ. ಮೇಕಳಿ ಬಳಿ ಮಠ ನಿರ್ಮಾಣ ಮಾಡಿರುವ ಈತ ಸ್ವಯಂ ಘೋಷಿತ ಸ್ವಾಮೀಜಿ. ಭಕ್ತರನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಮನೆಗೆ ಡ್ರಾಪ್ ಕೊಡ್ತಿನಿ ಅಂತ ಬಾಲಕಿಯನ್ನು ರಾಯಚೂರು, ಬಾಗಲಕೋಟೆಗೆ ಆರೋಪಿ ಕರೆದೊಯ್ದಿದ್ದಾನೆ. ಬಳಿಕ ಲಾಡ್ಜ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಬಾಲಕಿಯನ್ನು ಹೊರ ಜಿಲ್ಲೆಯಲ್ಲಿ ಬಿಟ್ಟು ಹೋಗಿದ್ದ.
ಬಾಗಲಕೋಟೆ ಜಿಲ್ಲೆಯಲ್ಲಿ ಈ ಮೊದಲು ಪ್ರಕರಣ ದಾಖಲಾಗಿತ್ತು. ಬಳಿಕ ಮೂಡಲಗಿ ಠಾಣೆಗೆ ಪ್ರಕಣ ವರ್ಗಾವಣೆ ಮಾಡಲಾಗಿದೆ. ಆರೋಪಿಯು ಕೃತ್ಯದ ಬಗ್ಗೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಿದ್ದೇವೆ. ಆರೋಪಿಯ ಕಾರನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಕೃತ್ಯ ಎಸಗಿದ ಲಾಡ್ಜ್ ಗಳ ಮೇಲೆ ಕ್ರಮ ವಹಿಸುತ್ತೇವೆ. ಲಾಡ್ಜ್ ಸಿಬ್ಬಂದಿ ವಯಸ್ಸು, ದಾಖಲೆ ಪಡೆಯಬೇಕಿತ್ತು, ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.