BREAKING ಚುನಾವಣಾ ರಾಜಕಾರಣಕ್ಕೆ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ ಘೋಷಣೆ
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ನನಗೆ ಈಗಾಗಲೇ 75 ವರ್ಷವಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆಯಿಲ್ಲ. ಯುವಕರಿಗೆ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಂಡಿದ್ದೇನೆ. ಆದರೆ, ಸಹಕಾರಿ ಕ್ಷೇತ್ರ ಹಾಗೂ ಸಕ್ರೀಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು. 'ಚುನಾವಣೆಗೆ ನಿಲ್ಲದೆ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತೇನೆ. ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಮುಂದುವರೆಯುವೆ ಎಂದು ಹೇಳಿದರು.
ಸಹಕಾರ ಕ್ಷೇತ್ರಕ್ಕೆ ಹೊಸ ಚಟುವಟಿಕೆಗಳು:
ಹುಣಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಾಜಣ್ಣ ಅವರು ಸಹಕಾರ ಕ್ಷೇತ್ರದ ಸ್ಥಿತಿಗತಿಗಳನ್ನು ವಿವರಿಸಿದರು. ಪಟ್ಟಭದ್ರರ ಹಿಡಿತದಿಂದ ಸಹಕಾರ ಕ್ಷೇತ್ರವನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಹಕಾರ ಕ್ಷೇತ್ರದ ಕಾಯ್ದೆಯಲ್ಲಿ ತಿದ್ದುಪಡಿ ತರಲು ರಾಜ್ಯಪಾಲರ ಅಂಕಿತದ ನಂತರ ಕೇಂದ್ರಕ್ಕೆ ಕಳುಹಿಸುವ ಅಗತ್ಯವಿಲ್ಲ. ಈ ತಿದ್ದುಪಡಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾದ ಅಗತ್ಯವಿಲ್ಲ. ಈ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಡೇರಿ ಚುನಾವಣೆಗಳು ಮುಂದೂಡಿಕೆಗೆ ತಾಂತ್ರಿಕ ಕಾರಣ:
ಎಂಡಿಸಿಸಿ ಸೇರಿದಂತೆ ಕೆಲವು ಡೇರಿ ಚುನಾವಣೆಗಳನ್ನು ಮತಪಟ್ಟಿ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲಾಗಿದೆ. ಅಲ್ಲದೆ ಮತಪಟ್ಟಿ ಸೇರಿದಂತೆ ಕೆಲ ತಾಂತ್ರಿಕ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿದೆ. ಈ ಬಗ್ಗೆ ಯಾವುದೇ ರಾಜಕೀಯ ಕಾರಣವಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟು, ಮಹಾಸಭೆ ಸೇರಿದಂತೆ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೇ ವಿನಃ, ಚುನಾವಣೆಯಲ್ಲಿ ಮತ ಹಾಕಲು ಸಹಕಾರ ಸಂಸ್ಥೆ ಸದಸ್ಯತ್ವ ಪಡೆಯುವುದಲ್ಲ. ಇದರಿಂದ ಆ ಸಂಘಗಳಿಗೆ ಹೊರೆಯಾಗಲಿದೆ. ಎಲ್ಲ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂಬುದು ಸರಕಾರದ ಉದ್ದೇಶ. ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಗಳನ್ನು ಕಾಲಮಿತಿಯಲ್ಲಿ ನಡೆಸಲಾಗುವುದು ಎಂದು ಸಚಿವ ರಾಜಣ್ಣ ತಿಳಿಸಿದ್ದಾರೆ.
ಜನ್ಮದಿನಾಚರಣೆ ಮುಂದೂಡಿಕೆ:
ಸಹಕಾರ ಸಚಿವ ಕೆ.ಎನ್.ರಾಜಣ್ಣರ 75ನೇ ಹುಟ್ಟುಹಬ್ಬದ ನಿಮಿತ್ತ ಮೇ.13 ರಂದು ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು. ಈ ವೇಳೆ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಲೋಕಾರ್ಪಣೆಯನ್ನೂ ಮಾಡಲು ಮುಂದಾಗಿತ್ತು. ಕೆ.ಎನ್‌ರಾಜಣ್ಣರ ಹಿತೈಷಿಗಳು ಬೃಹತ್ ಕಾರ್ಯಕ್ರಮ ಆಯೋಜಿಸಿದ್ದರು. ಒಂದು ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಆದರೆ, ಆಪರೇಷನ್ ಸಿಂದೂರ್ ಯುದ್ಧ ಸಂಘರ್ಷದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ. 2 ತಿಂಗಳಿನಿಂದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಶ್ರಮ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಬೇಕಿತ್ತು. ಇದೀಗ ಕಾರ್ಯಕ್ರಮ ಮುಂದೂಡಿಕೆ ಬೇಜಾರಿಲ್ಲಾ, ನಮಗೆ ದೇಶ ಮೊದಲು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ತಿಳಿಸಿದ್ದರು.