India Pakistan: ಭಾರತ- ಪಾಕ್ ನಡುವೆ ಉದ್ವಿಗ್ನತೆ ವೇಳೆ ಭಾರತದ ಕುರಿತ ಗೌಪ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ ಆರೋಪ: ಆರೋಪಿ ದೇವೇಂದ್ರ ಬಂಧನ
ಹೊಸದಿಲ್ಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ವೇಳೆ ಪಾಕಿಸ್ತಾನ ಸೇನೆ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಗೆ ಭಾರತೀಯ ಸೇನೆ, ಆಪರೇಷನ್ ಸಿಂಧೂರ್ ಸೇರಿದಂತೆ ಭಾರತದ ಕುರಿತು ಗೌಪ್ಯ ಮಾಹಿತಿ ರವಾನಿಸಿದ ಆರೋಪದ ಮೇಲೆ ಹರ್ಯಾಣದ ಕೈಥಾಲ್‌ನಲ್ಲಿ ದೇವೇಂದ್ರ ಎಂಬಾತನನ್ನು ಬಂಧಿಸಲಾಗಿದೆ.
ದೇವೇಂದ್ರ ಕೈಥಾಲ್‌ನ ಮಸ್ತ್‌ಗಢ್ ಚೀಕಾ ಗ್ರಾಮದ ನಿವಾಸಿಯಾಗಿದ್ದಾನೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ದೇವೇಂದ್ರನನ್ನು ಬಂಧಿಸಲಾಗಿದೆ ಎಂದು ಕೈಥಾಲ್ ಡಿಎಸ್‌ಪಿ ವೀರಭನ್ ತಿಳಿಸಿದ್ದಾರೆ.
ವಿಚಾರಣೆಯ ವೇಳೆ ದೇವೇಂದ್ರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಜೊತೆ ಸಂಪರ್ಕದಲ್ಲಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತ ಆಪರೇಷನ್ ಸಿಂಧೂರ್ ಬಗ್ಗೆಯೂ ಪಾಕಿಸ್ತಾನದ ಸೇನೆ ಮತ್ತು ಐಎಸ್ಎಸ್‌ಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡುತ್ತಿದ್ದ ಎಂದು ಡಿಎಸ್‌ಪಿ ವೀರಭನ್ ಹೇಳಿದ್ದಾರೆ.
ಸೈಬರ್ ಪೊಲೀಸರು ದೇವೇಂದ್ರನ ಬಳಿ ಪತ್ತೆಯಾದ ಸಾಧನಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಸತ್ಯ ಹೊರ ಬಂದ ಬಳಿಕ ಈ ಕುರಿತು ಕಾನೂನಾತ್ಮಕವಾಗಿ ಕ್ರಮವನ್ನು ಕೈಗೊಳ್ಳುವುದಾಗಿ ಹೇಳಿದರು.