Waqf Act: ಮುಂದಿನ ವಿಚಾರಣೆವರೆಗೆ ವಕ್ಫ್ ಆಸ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಿ: ಸುಪ್ರೀಂ ಕೋರ್ಟ್ ಆದೇಶ| Supreme Court
ವಕ್ಫ್ ತಿದ್ದುಪಡಿ ಕಾಯ್ದೆಯ ಪ್ರಕಾರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ 72 ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಬುಧವಾರ (ಎ.16) ವಿಚಾರಣೆ ಆರಂಭಿಸಿತ್ತು.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದಾದರೆ ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಮಾಡಿಕೊಡುತ್ತೀರಾ? ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
ಗುರುವಾರ ಕೇಂದ್ರ ಸರ್ಕಾರದ ಪರ ಸುಪ್ರೀಂಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳಿಗೆ ಉತ್ತರ ನೀಡಲು ಒಂದು ವಾರಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೇ ನೂತನ ಕಾಯ್ದೆಯ ಕಲಂ 9 ಮತ್ತು 14ರ ಪ್ರಕಾರ ಸರ್ಕಾರ ವಕ್ಫ್ ಗೆ ಯಾವುದೇ ನೇಮಕಾತಿ ಮಾಡುವುದಿಲ್ಲ ಎಂಬುದಾಗಿ ತಿಳಿಸಿದ್ದರು.
ನೂತನ ಕಾಯ್ದೆಯ ಅನ್ವಯ ಸೆಂಟ್ರಲ್ ವಕ್ಫ್ ಮಂಡಳಿಗೆ ಕೇವಲ 8 (ಮೊದಲು 22) ಮಂದಿ ಸದಸ್ಯರು ಹಾಗೂ ರಾಜ್ಯ ವಕ್ಫ್ ಮಂಡಳಿಗೆ ಕೇವಲ ನಾಲ್ವರು (ಮೊದಲು 11) ಸದಸ್ಯರ ನೇಮಕ ಮಾಡಬಹುದಾಗಿದೆ.
ಪ್ರಕರಣದ ಸೂಕ್ಷ್ಮತೆ ಗಮನಿಸಿದ ಸುಪ್ರೀಂಕೋರ್ಟ್, ವಕ್ಫ್ ಕಾಯ್ದೆಗೆ ಸಂಪೂರ್ಣವಾಗಿ ತಡೆ ನೀಡುವುದಿಲ್ಲ ಎಂಬುದರ ಸೂಚನೆ ನೀಡಿದ್ದು, ಕಾನೂನಿನಲ್ಲಿ ಕೆಲವೊಂದು ಸಕಾರಾತ್ಮಕ ಅಂಶಗಳಿವೆ ಎಂಬುದನ್ನು ಗಮನಿಸಿದ್ದೇವೆ. ಆದರೆ ಕಾನೂನಿಗೆ ಸಂಪೂರ್ಣ ತಡೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.