Waqf Amendment Act: ವಕ್ಫ್ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ: ರಸ್ತೆ ಸಂಚಾರ ನಿರ್ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ!
ಆದರೆ, ಪ್ರತಿಭಟನೆ ವೇಳೆ ರಸ್ತೆ ಸಂಚಾರ ನಿರ್ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮಂಗಳೂರಿನ ರಾಜೇಶ್ ಅರ್ಕುಳ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ವಕ್ಫ್ ತಿದ್ದುಪಡಿ ವಿಚಾರ ಸುಪ್ರೀಂ ಕೋರ್ಟ್ ಪರಿಗಣಿಸುವಾಗ ಪ್ರತಿಭಟನೆ ಸರಿಯಲ್ಲ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್ಹೆಚ್ 73 ಬಂದ್ ಮಾಡಿ ಪ್ರತಿಭಟನೆ ನಡೆಸುವಂತಿಲ್ಲ. ಸರ್ಕಾರ ಅನುಮತಿ ನೀಡಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು. ಸರ್ಕಾರ ಅನುಮತಿ ನೀಡುವಾಗ ಸುಪ್ರೀಂಕೋರ್ಟ್ ವಿಚಾರಣೆ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಪೀಠ ಹೇಳಿದೆ.
ವಕ್ಫ್ ತಿದ್ದುಪಡಿ ಜಾಯ್ದೆ ಜಾರಿ ವಿರೋಧಿಸಿ ದೇಶದ ಹಲವು ಕಡೆ ಪ್ರತಿಭಟನೆ ನಡೆಯುತ್ತಿವೆ. ಆದ್ರೆ ಪಶ್ಚಿಮ ಬಂಗಾಳದಲ್ಲಿ ಹೋರಾಟ ಹಿಂಸಾಚಾರಕ್ಕೆ ತಿರುಗಿ ಘರ್ಷಣೆಗೆ ಕಾರಣವಾಗುತ್ತಿದೆ. ವಕ್ಫ್ ತಿದ್ದುಪಡಿ ವಿರೋಧಿ ಹೋರಾಟಕ್ಕೆ ಮಂಗಳೂರಿನಲ್ಲಿ ಮೆಗಾ ಪ್ಲಾನ್ ರೂಪಿಸಲಾಗಿದೆ. ಕರ್ನಾಟಕ ಉಲಮಾ ಸಮನ್ವಯ ಸಮಿತಿ ಈ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದು, ಇದೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಹೋರಾಟಕ್ಕೆ ಧಾರ್ಮಿಕ ಪಂಡಿತರು ಧುಮುಕಲಿದ್ದಾರೆ.
ಮುಸ್ಲಿಂ ಬಾಹುಳ್ಯದ ಕರಾವಳಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿಸಿ ದೊಡ್ಡ ಪ್ರತಿಭಟನೆ ಮಾಡಬೇಕೆಂದು ಈಗಾಗಲೇ ಮಸೀದಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಶುಕ್ರವಾರ ಮಸೀದಿ ಪ್ರಾರ್ಥನೆ ಬಳಿಕ ಎಲ್ಲ ಮುಸ್ಲಿಂ ಜನತೆ ಪ್ರತಿಭಟನೆಗೆ ಬರುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಲಕ್ಷಾಂತರ ಜನ ಬರುವ ಸಾಧ್ಯತೆಯಿದೆ.
ಕರ್ನಾಟಕದ ಪ್ರಮುಖ ಮುಸ್ಲಿಂ ಧಾರ್ಮಿಕ ನಾಯಕರಾದ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ಮಾರ್ಗದರ್ಶನದಲ್ಲಿ ಈ ಪ್ರತಿಭಟನಾ ಸಭೆ ನಡೆಯಲಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಕರ್ನಾಟಕದಲ್ಲಿ ಮೊದಲ ಬಾರಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಸಭೆ ಇದಾಗಿದ್ದು ಮುಂದೆ ಬೆಂಗಳೂರು, ಹುಬ್ಬಳಿಯಲ್ಲಿಯೂ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದೆ.
2020ರಲ್ಲಿ ಇದೇ ಶಾ ಗಾರ್ಡನ್ ಮೈದಾನದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆದಿತ್ತು. ಇದೀಗ ವಕ್ಫ್ ತಿದ್ದುಪಡಿ ವಿರುದ್ಧ ಮತ್ತೊಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಮಂಗಳೂರು ಸಜ್ಜುಗೊಂಡಿದೆ. ಪ್ರತಿಭಟನಾ ಸಭೆಗೆ ಬರುವಾಗ ಶಿಸ್ತು, ಶಾಂತಿಯನ್ನು ಪಾಲಿಸಬೇಕು, ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಆಯೋಜಕರು ಮನವಿ ಮಾಡಿಕೊಂಡಿದ್ದು ಭದ್ರತೆ ದೃಷ್ಟಿಯಿಂದ ಪೊಲೀಸರು ಸಹ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.