ಮಳೆಯ ರಜೆ ಸರಿದೂಗಿಸಲು 10 ಶನಿವಾರ ಪೂರ್ಣ ದಿನ ತರಗತಿ..!
ಉಡುಪಿ: ರಾಜ್ಯದಾದ್ಯಂತ ಮಳೆಯ ಆರ್ಭಟದಿಂದಾಗಿ ಅಲ್ಲಲ್ಲಿ ಅನಾಹುತಗಳು ನಡೆದೇ ಹೋಗಿದ್ದು, ವಿಪರೀತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಮಕ್ಕಳ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿತ್ತು.
ಆದರೆ ಇದೀಗ ಶಾಲೆಗಳಿಗೆ ನೀಡಿರುವ ರಜೆಯನ್ನು ಸರಿದೂಗಿಸುವ ಚಿಂತನೆಗೆ ಬೈಂದೂರು ಶಿಕ್ಷಣ ಇಲಾಖೆ ಮುಂದಾಗಿದೆ.
ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಒಟ್ಟು ಐದು ರಜೆಯನ್ನು ನೀಡಲಾಗಿತ್ತು. ಅದನ್ನು ಸರಿದೂಗಿಸುವ ಹಿನ್ನೆಲೆ ಜೂನ್ 21, 28, ಜು.5, 12, 19, 26, ಅಗಸ್ಟ್ 2, 9, 16, 23 ಒಟ್ಟು 10 ಶನಿವಾರ ಪೂರ್ಣ ದಿನದವರೆಗೆ ಶಾಲೆ ನಡೆಸಲು ಆದೇಶಿಸಿ ಜಿಲ್ಲೆಯ ಸರ್ಕಾರಿ, ಅನುದಾನ ರಹಿತ, ಅನುದಾನಿತ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮುಖ್ಯಸ್ಥರಿಗೆ ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ ಹೊರಡಿಸಿದ್ದಾರೆ.