BREAKING NEWS| ಮಂಗಳೂರು: ವಿವಿಧ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆಗಳ ಆಚರಣೆ; ಷರತ್ತು ವಿಧಿಸಿದ ಪೊಲೀಸ್ ಇಲಾಖೆ

ಮಂಗಳೂರು: ಹಬ್ಬಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ, ಗಣೇಶ ಚತುರ್ಥಿ, ಮುಹರ್ರಂ, ಈದ್ ಮಿಲಾದ್‌, ನವರಾತ್ರಿ ಉತ್ಸವ, ದೀಪಾವಳಿ, ಕ್ರಿಸ್ಮಸ್ ಪ್ರಮುಖವಾದವುಗಳಾಗಿವೆ.

ಈ ಸಂಬಂಧ, ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ಹಿತದೃಷ್ಠಿಯಿಂದ ಕೆಲವು ಷರತ್ತುಗಳನ್ನು ಪಾಲಿಸಲು ಮಂಗಳೂರು ನಗರ ಪೊಲೀಸ್ ಇಲಾಖೆ ಸೂಚಿಸಿದೆ. ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಎಲ್ಲಾ ಆಯೋಜಕರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿ ಹಬ್ಬದ ಮುಂಚಿತವಾಗಿ ನಿಖರವಾದ ಮಾರ್ಗಸೂಚಿಗಳನ್ನು (ರಸ್ತೆ, ಸಮಯ, ಧ್ವನಿ ನಿಯಂತ್ರಣ) ಹೊರಡಿಸಲಾಗುತ್ತದೆ. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ. ಯಾವುದೇ ಷರತ್ತುಗಳ ಉಲ್ಲಂಘನೆಯಾದಲ್ಲಿ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳ ಮೇಲೆ ಇರಲಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

1. ಕಡ್ಡಾಯ ಪೊಲೀಸ್ ಅನುಮತಿ ಮತ್ತು ಸಮಯದ ನಿರ್ಬಂಧ ಪಾಲನೆ

ಪೊಲೀಸ್ ಹಾಗೂ ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆಯನ್ನು ನಡೆಸಲು ಅನುಮತಿಸಲಾಗದು. ಈ ಸಮಯದ ನಂತರ ನಡೆಯುವ ಯಾವುದೇ ಸಮಾವೇಶವನ್ನು ಕಾನೂನುಬಾಹಿರ ಸಮಾವೇಶವೆಂದು ಪರಿಗಣಿಸಲಾಗುವುದು. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲೀಕರಿಂದ ನಿರಾಕ್ಷೇಪಣಾ ಪತ್ರ' (NOC) ಪಡೆದು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅನುಮೋದಿತ ಸ್ಥಳ ಅಥವಾ ಮಾರ್ಗದಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಯಾವುದೇ ವ್ಯತಿರಿಕ್ತತೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

2. ಡಿಜೆ ಸಂಪೂರ್ಣ ನಿಷೇಧ; ಧ್ವನಿವರ್ಧಕಗಳಿಗೆ ಅನುಮತಿ ಅಗತ್ಯ

ಡಿ.ಜೆ, ಜೋರಾದ ಸ್ಪೀಕ‌ರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿ ಪಡೆಯುವುದು ಅಗತ್ಯವಿದೆ ಮತ್ತು ರಾತ್ರಿ 10 ಗಂಟೆಗೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದ ಮಟ್ಟಗಳು ಈ ಮಿತಿಗಳ ಒಳಗಿರಬೇಕು: ವಾಣಿಜ್ಯ ಪ್ರದೇಶ - 65 ಡೆಸಿಬಲ್, ವಾಸಸ್ಥಳ - 55 ಡೆಸಿಬಲ್, ನಿಶ್ಯಬ್ದ ವಲಯ - 50 ಡೆಸಿಬಲ್.

3. 24x7 ಭದ್ರತೆ ಮತ್ತು ಸಿಸಿಟಿವಿ ಕಡ್ಡಾಯ

ಆಯೋಜಕರು ಸ್ಥಳದಲ್ಲಿ 24x7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು.

4. ಧಾರ್ಮಿಕ ವಿರೋಧಿ ಘೋಷಣೆಗಳು ಮತ್ತು ದ್ವೇಷ ಭಾಷಣ ದ್ವೇಷ ನಿಷೇಧ (ಮುದ್ರಣ & ಸಾಮಾಜಿಕ ಮಾಧ್ಯಮದಲ್ಲಿ)

ಯಾವುದೆ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿರಬಾರದು.

5. ಜನಸಂದಣಿಗೆ ನಿಯಂತ್ರಣಕ್ಕೆ ಸಮರ್ಪಕ ಸ್ವಯಂಸೇವಕರ ನೇಮಕಾತಿ ಕಡ್ಡಾಯ

ಸಾಮರ್ಥ್ಯ ಮೀರದಂತೆ ಜನಸಮೂಹ ನಿಯಂತ್ರಿಸಬೇಕು. ಸಮರ್ಪಕವಾಗಿ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು.

6. ಪೆಂಡಾಲ್ ಎತ್ತರ ನಿಯಮಗಳು ಮತ್ತು ವಾಹನ ಸುರಕ್ಷಾ ನಿಯಮ ಪಾಲನೆ

ಪೆಂಡಾಲು, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳು ಇತ್ಯಾದಿಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು. ವಾಹನಗಳು ನೋಂದಣಿ ಪತ್ರ, ದೃಢತೆ ಪ್ರಮಾಣಪತ್ರ, ವಿಮೆ ಮತ್ತು PUC ಪ್ರಮಾಣ ಪತ್ರ ಹೊಂದಿರಬೇಕು.

7. ಅಗ್ನಿಶಾಮಕ ಮತ್ತು ತುರ್ತು ವ್ಯವಸ್ಥೆಗಳ ಒದಗಿಸುವಿಕೆ:

ಅಗ್ನಿ ನಂದಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿವೆ. ಬೆಂಕಿಯ ಮೂಲಗಳ ಬಳಿಯಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಇರಿಸಬಾರದು. ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು, ಏಕ ಬಳಕೆ ಪ್ಲಾಸ್ಟಿಕ್ ನಿಷೇದಿಸಿದೆ.

8. ವಾಹನ ಸಂಚಾರ ಮುಕ್ತವಾಗಿ ನಿರ್ವಹಣೆ ಮತ್ತು ತುರ್ತು ಮಾರ್ಗಗಳ ನಿರ್ಬಂಧ

ವಾಹನ ಮತ್ತು ಪಾದಚಾರಿ ಸಂಚಾರಕ್ಕೆ ಯಾವುದೇ ತಡೆ ಇಲ್ಲದಂತೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡ ಉಂಟುಮಾಡಬಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು.

9. ಸಾರ್ವಜನಿಕ/ಖಾಸಗಿ ಆಸ್ತಿಗೆ ಹಾನಿ ಮಾಡಬಾರದು

ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟುಮಾಡಬಾರದು.

10. ಸಮಯ, ಕಾರ್ಯಕ್ರಮ ವಿವರ ಮತ್ತು ಪೊಲೀಸ್ ಸೂಚನೆ ಪಾಲನೆ

ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲಾ ಪೊಲೀಸ್ ಸೂಚನೆಗಳನ್ನು ಪಾಲಿಸಬೇಕು.

11. ಮಹಿಳೆಯರ ಸುರಕ್ಷತೆಗೆ ಶೂನ್ಯ ಸಂಹಿತೆ ನೀತಿ

ಕಾರ್ಯಕ್ರಮದ ಸಮಯ ಮಹಿಳೆಯರ ಚುಡಾವಣೆ, ಹಿಂಬಾಲಿಸುವುಕೆ, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳು ನಡೆಯದಂತೆ ನೋಡಿಕೊಳ್ಳಬೇಕು.

12. ಸ್ವಚ್ಛತೆ, ಫ್ಲೆಕ್ಸ್ ಮತ್ತು ಬ್ಯಾನರ್ ನಿಯಂತ್ರಣ:

ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.

13. ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿ ವಸ್ತುಗಳ ನಿಷೇಧ

ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.

14. ಡ್ರೋನ್ ಬಳಸಲು ಮುಂಚಿತ ಅನುಮತಿ ಕಡ್ಡಾಯ‌

ಮುಂಚಿತ ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ UAV ಬಳಸುವುದು ನಿಷಿದ್ಧ.

15. ಮೆರವಣಿಗೆಯಲ್ಲಿ ಪ್ರಾಣಿಗಳ ಬಳಕೆಗೆ ನಿಯಂತ್ರಣ

ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯ.

16. ಪೊಲೀಸ್ ತಪಾಸಣೆಗೆ ಅಡ್ಡಿ ಮಾಡುವುದು ನಿಷಿದ್ಧ

ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳವನ್ನು ತಪಾಸಣೆ ಮಾಡಬಹುದು.

17. ಅನುಮಾನಾಸ್ಪದ ಚಟುವಟಿಕೆಗಳ ವರದಿ ನೀಡುವುದು ಕಡ್ಡಾಯ‌

ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ, ಸುಳ್ಳು ಮಾಹಿತಿ ಅಥವಾ ಗಲಭೆಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆಮಾಡಿ ವರದಿ ಮಾಡಬೇಕು.

ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆಯು ಭಾರತೀಯ ನ್ಯಾಯ ಸಂಹಿತೆ 2023, ಕರ್ನಾಟಕ ಪೊಲೀಸ್ ಕಾಯ್ದೆ 1963, ಪರಿಸರ ಸಂರಕ್ಷಣಾ ಕಾಯ್ದೆ 1986, ಮೋಟಾರು ವಾಹನ ಕಾಯ್ದೆ 1988, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಶಸ್ತ್ರಾಸ್ತ್ರ ಕಾಯ್ದೆ 1959, ಡೋನ್ ನಿಯಮಗಳು 2021, ಸ್ಫೋಟಕಗಳ ಕಾಯ್ದೆ 1884 ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಕುಮಾರ್ ರೆಡ್ಡಿ ಮಂಗಳೂರು: ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗೆಗಳ ಆಚರಣೆ: ಷರತ್ತು ವಿಧಿಸಿದ ಪೊಲೀಸ್ ಇಲಾಖೆ ಎಚ್ಚರಿಸಿದ್ದಾರೆ.

Next Post Previous Post
ಜಾಹೀರಾತು

Advertisement

Advertisement

```

Advertisement

Advertisement