Upi Money Transfer: ಯುಪಿಐ ಸೇವೆ ಇನ್ನು ಉಚಿತವಲ್ಲ, 2000 ರೂ ಮೇಲ್ಪಟ್ಟ ಟ್ರಾನ್ಸಾಕ್ಷನ್‌ಗೆ MDR ಶುಲ್ಕ ಪ್ರಸ್ತಾವನೆ

ಯಾರಿಗಾದರೂ ಹಣ ಕಳುಹಿಸುವುದು, ಬಿಲ್ ಪಾವತಿ, 10, 20 ಸೇರಿದಂತೆ ದೊಡ್ಡ ಮೊತ್ತದ ಖರೀದಿಯಲ್ಲೂ ಪಾವತಿಗೆ ಯುಪಿಐ ಬಳಸಲಾಗುತ್ತಿದೆ. ಸುಲಭವಾಗಿ ಹಣ ಪಾವತಿ ಮಾಡಬಹುದಾದ ಕಾರಣ ಬಹುತೇಕರು ಯುಪಿಐ ಸೇವೆ ಬಳಸುತ್ತಿದ್ದಾರೆ. ಗೂಗಲ್ ಪೇ, ಪೋನ್‌ಪೇ, ಪೇಟಿಎಂ ಸೇರಿದಂತೆ ಹಲವು ಸಂಸ್ಥೆಗಳು ಯುಪಿಐ ಸೇವೆ ನೀಡುತ್ತಿದೆ. ಇಷ್ಟು ದಿನ ಯುಪಿಐ ಎಲ್ಲಾ ಟ್ರಾನ್ಸಾಕ್ಷನ್ ಉಚಿತವಾಗಿತ್ತು. ಯಾವುದೇ ಶುಲ್ಕ ಇರಲಿಲ್ಲ. ಆದರೆ ಶೀಘ್ರದಲ್ಲೇ ಯುಪಿಐ ಟ್ರಾನ್ಸಾಕ್ಷನ್ ಮೇಲೆ ಶುಲ್ಕ ವಿಧಿಸುವ ಸಾಧ್ಯತೆ ಇದೆ.

ಕಳೆದ ಕೆಲ ವರ್ಷಗಳಿಂದ ಯುಪಿಐ ಸೇವೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್ ವಾಲೆಟ್ ಸೇರಿದಂತೆ ಹಲವು ಸೇವೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದೆ. ಇದೀಗ ಗೂಗಲ್ ಪೇ, ಫೋನ್‌ಪೇ ಸೇರಿದಂತೆ ಫಿನ್‌ಟೆಕ್ ಕಂಪನಿಗಳು ಪ್ರತಿ ಯುಪಿಐ ಟ್ರಾನ್ಸಾಕ್ಷನ್ ಮೇಲೆ ಎಂಡಿಆರ್ ಶುಲ್ಕ ವಿಧಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ. ಸದ್ಯ ಇರುವ ಶೂನ್ಯ ಶುಲ್ಕ ನಿಯಮದಿಂದ ಯುಪಿಐ ಪಾವತಿ ಸೇವೆಗಳನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಪ್ರತಿ ಹಂತದಲ್ಲೂ ಗ್ರಾಹಕರಿಗೆ ಸುರಕ್ಷತೆ, ಭದ್ರತೆ ಒದಗಿಸಬೇಕು. ಹೀಗಾಗಿ ಉಚಿತ ಸಾಧ್ಯವಿಲ್ಲ. ಇದಕ್ಕಾಗಿ ಎಂಡಿಆರ್ ಶುಲ್ಕ ಪಾವತಿಸಲು ಫಿನ್‌ಟೆಕ್ ಕಂಪನಿಗಳು ಆಗ್ರಹಿಸಿದೆ.

ಏನಿದು ಎಂಡಿಆರ್ ಶುಲ್ಕ?
ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಎಂದರೆ ವ್ಯಾಪಾರಿಗಳು ಯುಪಿಐ ಸೇವೆ ಮೂಲಕ ಹಣ ಪಡೆಯಲು ಇದರ ಪ್ರೊಸೆಸ್ಸಿಂಗ್ ಶುಲ್ಕವಾಗಿ ಬ್ಯಾಂಕ್ ಅಥವಾ ಯುಪಿಐ ಸರ್ವೀಸ್ ನೀಡುತ್ತಿರುವ ಕಂಪನಿಗಳಿಗೆ ಪಾವತಿಸುವ ಹಣ. ಕ್ರಿಕೆಡಿಟ್ ಕಾರ್ಡ್ ಮೂಲಕ ಟ್ರಾನ್ಸಾಕ್ಷನ್ ನಡೆಸಿದರೆ ವ್ಯಾಪಾರಿಗಳು ಇಂತಿಷ್ಟು ಟ್ರಾನ್ಸಾಕ್ಷನ್‌ಗೆ ಈ ಎಂಡಿಆರ್ ಶುಲ್ಕ ಪಾವತಿಸಬೇಕು. ಹೀಗಾಗಿ ಹಲವರು ಗ್ರಾಹಕರು ಕ್ರಿಡಿಟ್ ಕಾರ್ಡ್ ಮೂಲಕ ವ್ಯಾಪಾರಿಗಳಿಗೆ ಪಾವತಿ ಮಾಡಲು ಮುಂದಾದಾಗ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಾರೆ.

ಫಿನ್‌ಟೆಕ್ ಕಂಪನಿಗಳು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 2,000 ರೂಪಾಯಿಗಿಂತ ಹೆಚ್ಚಿನ ಟ್ರಾನ್ಸಾಕ್ಷನ್‌ನಲ್ಲಿ ವ್ಯಾಪಾರಿಗಳು ಎಂಡಿಆರ್ ಶುಲ್ಕ ಪಾವತಿಸಬೇಕು ಎಂದು ಹೇಳಿದೆ. ವಾರ್ಷಿಕವಾಗಿ 20 ಲಕ್ಷ ರೂಪಾಯಿ ವಹಿವಾಟು ನಡೆಸುವ ವ್ಯಾಪಾರಿಗಳು ಅಥವಾ ಯುಪಿಐ ಸೇವೆ ಮೂಲಕ ಟ್ರಾನ್ಸಾಕ್ಷನ್ ಮಾಡುವವರು ಎಂಡಿಆರ್ ಶುಲ್ಕ ಪಾವತಿಸಬೇಕು ಎಂದು ಪ್ರಸ್ತಾವನೆಯಲ್ಲಿ ಫಿನ್‌ಟೆಕ್ ಕಂಪನಿಗಳು ಹೇಳಿದೆ. 2,000 ರೂಪಾಯಿಗಿಂತ ಹೆಚ್ಚಿನ ಟ್ರಾನ್ಸಾಕ್ಷನ್ ವೇಳೆ 0.3 ಶೇಕಡಾ ಎಂಡಿಆರ್ ಶುಲ್ಕ ವಿಧಿಸುವಂತೆ ಮನವಿ ಮಾಡಿದೆ.

ಎಂಡಿಆರ್ ಶುಲ್ಕ ವಿಧಿಸಿದರೆ ನೇರವಾಗಿ ಗ್ರಾಹಕರಿಗೆ ತಟ್ಟದಿದ್ದರೂ ಪರೋಕ್ಷವಾಗಿ ತಟ್ಟಲಿದೆ. ಕಾರಣ ಜನಸಾಮಾನ್ಯರು ಎಲ್ಲೇ ಹೋಗಿ 2,000 ರೂಪಾಯಿಗಿಂತ ಮೇಲಿನ ಹಣವನ್ನು ಯುಪಿಐ ಮೂಲಕ ಪಾವತಿಸಲು ಮುಂದಾದರೆ ವ್ಯಾಪಾರಿಗಳು ಅಥವಾ ಇತರೆಡೆ ನಗದು ವ್ಯವಹಾರ ಮಾಡಲು ಸೂಚಿಸಬಹುದು. ಇಲ್ಲದಿದ್ದರೆ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡಬಹುದು. ಹೀಗಾಗಿ ನ್ಯಾಷನಲ್ ಪೇಮೇಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ನೇರವಾಗಿ ಗ್ರಾಹಕರಿಗೆ ವಸೂಲಿ ಮಾಡದಿದ್ದರೂ, ಪರೋಕ್ಷವಾಗಿ ಈ ಹೊರೆ ಗ್ರಾಹಕರ ಮೇಲೆ ಬೀಳಲಿದೆ.

ಫಿನ್‌ಟೆಕ್ ಕಂಪನಿಗಳು ಈ ಪ್ರಸ್ತಾವನೆ ಸಲ್ಲಿಸಿದೆ. ಆದರೆ NPCI ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಸ್ತಾವನೆ ಕುರಿತು ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತದೆ. ಈ ಕುರಿತು ಎಲ್ಲಾ ಚರ್ಚೆ ನಡೆಸಲಾಗುತ್ತದೆ ಎಂದು NPCI ಹೇಳಿದೆ. NPCI ಪ್ರಮುಖವಾಗಿ ಯುಪಿಐ ಸೇವೆಯನ್ನು ಯಾವುದೇ ಶುಲ್ಕವಿಲ್ಲದೆ ಜನಸಾಮಾನ್ಯರೂ ಬಳಕೆ ಮಾಡುವಂತೆ ಮಾಡುವುದಾಗಿದೆ. ಹೀಗಾಗಿ ಈ ಪ್ರಸ್ತಾವನೆ ಕುರಿತು ಸಾಧಕ ಬಾಧಕ ಚರ್ಚೆ ನಡೆಸಲಾಗುತ್ತದೆ ಎಂದಿದೆ.