ನೀತಿ ಕಥೆ: ಮೊಲದ ಸೇಡು ✍️ ನಾರಾಯಣ ರೈ ಕುಕ್ಕುವಳ್ಳಿ.
ಓಟದ ಸ್ಪರ್ಧೆಯಲ್ಲಿ ಆಮೆಯಿಂದ ಸೋತ ಮೊಲವು ಎಲ್ಲರ ಕೊಂಕು ಮಾತಿನಿಂದ ಅವಮಾನಕ್ಕೊಳಗಾಯಿತು.ಸೇಡು ತೀರಿಸಿಕೊಳ್ಳಲೇ ಬೇಕೆಂದು,ಮೃಗರಾಜ ಸಿಂಹರಾಜನ ಬಳಿಗೆ ಹೋಗಿ "ಸಿಂಹರಾಜನೇ,ಆಮೆಯಿಂದ ಸೋತು ಅವಮಾನಿತನಾದ ನನಗೆ ನೀನು ಸಹಾಯ ಮಾಡಬೇಕು.ಹೇಗಾದರೂ ಮಾಡಿ ನಾನೇ ಗೆಲ್ಲುವಂತೆ ಮಾಡುವೆಯಾ...?"ಎಂದಾಗ,ಸಿಂಹರಾಜ "ಗೆಳೆಯಾ ಹೆದರ ಬೇಡ..ನಾಳೆ ಆಮೆಯ ಕರೆಸುವೆ...ನೀನೂ ಬಾ... ಯೋಚನೆ ಮಾಡಿ ನಿನ್ನ ಗೆಲ್ಲಿಸುವೆ..."ಎಂದು ಹೇಳಿ ಮೊಲವನ್ನು ಕಳಿಸಿತು.
ಮರುದಿನ ಬೆಳಿಗ್ಗೆ ಮೊಲ ಸಿಂಹರಾಜನ ಆಸ್ಥಾನಕ್ಕೆ ಹೋದಾಗ,ಆಮೆಯೂ ಗೆಲುವಿನ ನಗೆ ಬೀರಿ ತನ್ನ ಬೆಂಬಲಿಗರೊಂದಿಗೆ ನಿಂತಿತ್ತು.
ಸಿಂಹರಾಜ ಘರ್ಜಿಸುತ್ತಾ,"ನನ್ನ ಸಾಮ್ರಾಜ್ಯದಲ್ಲಿ ಯಾರೂ ನಿರಾಶೆಯಿಂದ ಇರಬಾರದು.ಆಮೆಯಿಂದ ಸೋತ ಮೊಲಕ್ಕೆ ತುಂಬಾ ಬೇಸರವಾಗಿದೆ.ಆದ್ದರಿಂದ ಅವರ ಮಧ್ಯೆ ಇದನ್ನೊಂದು ಸ್ಪರ್ಧೆ ಏರ್ಪಡಿಸುವೆ.ಎಲ್ಲರೂ ನಮ್ಮ ಸೀರೆ ನದಿಯ ದಂಡೆಗೆ ಬನ್ನಿ...."ಎಂದು ಹೇಳಿ ಮೊಲದ ಮತ್ತು ಆಮೆಯ ಕಿವಿಯಲ್ಲಿ ಗುಟ್ಟೊಂದನು ಹೇಳಿತು.
ಸಂಜೆಯ ಸಮಯ.ಎಲ್ಲರೂ ಸೀರೆ ನದಿಯ ದಂಡೆಯಮೇಲೆ ಸೇರಿದರು.ಸ್ಪರ್ಧೆ ಆರಂಭವಾಯಿತು.ಸಿಂಹರಾಜ ..."ನೋಡಿ ಈ ನಮ್ಮ ನದಿಯ ಆಚೆಯ ದಡದಲ್ಲಿ ನಮ್ಮ ಸೈನಿಕರಿದ್ದಾರೆ.ಯಾರು ಮೊದಲು ಹೋಗಿ ಅವರ ಮುಟ್ಟುವಿರೋ ನೀವು ಗೆದ್ದಂತೆ..."ಹೇಳಿ ಓಡಲು,ಆಜ್ಞೆ ಕೊಟ್ಟಾಗ,ಆಮೆ "ಈ ಬಾರಿಯೂ ಗೆಲುವು ನನ್ನದೇ..."ಎಂದು ಬೀಗಿ ತೊಡೆ ತಟ್ಟಿತು.ಸಿಂಹ ರಾಜ..."ಸಿದ್ಧರಾಗಿ ಒಂದು...ಎರಡು...ಮೂರು..."ಎಂದಾಗ ಮೊಲ ಮತ್ತು ಆಮೆ ನೀರಿಗೆ ಜಿಗಿದವು.ಆಮೆ ನೀರಿನಾಳಕೆ ಹೋಗಿ ಮೇಲೆ ಬಂದು ನೋಡಿದಾಗ,ಅದರ ಬೆನ್ನಮೇಲೆ ಕುಳಿತ ಮೊಲವ ನೋಡಿ, "ಎಲೈ ಮೋಸಗಾರ...ನಿನ್ನಾ..."ಎಂದು ಮೈ ಕೊಡವಿದಾಗ,ಆಗಲೇ ದಡಸಮೀಪಿಸಿದ್ದ ಮೊಲ,ಆಮೆಯ ಬೆನ್ನಿನಿಂದ ಛಂಗನೆ ಹಾರಿ,ಸೈನಿಕರ ಬಳಿ ಸೇರಿತು.ಸೈನಿಕರು ವಿಜಯ ಘೋಷ ಕೂಗಿದರು.ಮೊಲಕೆ ಸಿಂಹರಾಜ ವಿಜಯಮಾಲೆ ತೊಡಿಸಿತು."ಮೋಸ...ಮೋಸ...ಎಂದು ಕೂಗಿದ ಆಮೆಯನ್ನು ಸೈನಿಕರು ಬಂಧಿಸಿ ಸೆರೆಮನೆಗೆ ಹಾಕಿದರು.
ನೀತಿ:ಬದುಕಲ್ಲಿ ಎಂದೂ ಬೀಗ ಬಾರದು ಉಪಾಯದಿಂದ ಗೆಲುವು ಸಾಧಿಸಬೇಕು.!!!
✍️ ನಾರಾಯಣ ರೈ ಕುಕ್ಕುವಳ್ಳಿ.